ಯೋಚನೆ ಮಾಡ್ಬೇಕು ಸ್ವಾಮಿ
"ಎಲ್ಲದಕ್ಕೂ ಯಾಕಿಷ್ಟು ಯೋಚನೆ ಮಾಡ್ತೀಯಾ?" ಅಂತಾ ಉದ್ದಾನುದ್ದ ಕಾಳಜಿಯಿಂದ ಮಾತಾಡೋರಿಗೆ ನನ್ನದೊಂದು ಪ್ರಶ್ನೆ: "ನೀವು ಯೋಚನೆ ಮಾಡೋದೇ ಇಲ್ವಾ?" ಹಾಗೊಂದು ಹೀಗೊಂದು ಚಿಕ್ಕ ಘಟನೆ ನಡೆದರೂ ಸಾಕು ಯೋಚನೆ ಹತ್ತುತ್ತೆ, ಯಾಕೆ ಅಂತಾನೆ ಬಗೆಹರಿಯೋದಿಲ್ಲ ಅಂತಾನೂ ಯೋಚನೆಯಾಗುತ್ತೆ, ಹೀಗೆ ಎಲ್ಲದಕ್ಕೂ ಯೋಚಿಸುವವರಾದ್ರೆ ನಾವು ಒಂದೇ ದೋಣಿಯ ಪ್ರಯಾಣಿಕರು ಅಂದುಕೊಳ್ಳಿ.
ತಲೆ ಚಿಟ್ಟು ಹಿಡಿಸುವ ಯೋಚನೆಗಳಾದ್ರೂ ಒಂಥರಾ ಸಂತೋಷ ಕೊಡುತ್ತವೆ. ಈ ಮೆದುಳಲ್ಲಿ ಅಷ್ಟೆಲ್ಲ ಸ್ಟೋರೇಜ್‌ಗೆ ಜಾಗವಾದರೂ ಎಲ್ಲಿದೆ ಅಂತಾನೂ ಯೋಚನೆಯಾಗುತ್ತೆ! ಕವಿಗಡಚುವಷ್ಟು ಮಾತನಾಡುವ ಸಹೋದ್ಯೋಗಳ ಮಧ್ಯೆಯೂ, ಪ್ರೇಮ ವಿಹಾರದಲ್ಲಿ ತೊಡಗಿರುವ ಅಥವಾ ಜೋರಾಗಿ ಭೋಜ್‌ಪುರಿ ಹಾಡು ಹಾಕಿಕೊಂಡಿರುವ ರೂಮ್‌ಮೇಟ್‌ಗಳಿರುವ ಪಿಜಿಯಲ್ಲೂ ಮೈಮರೆತು ಯೋಚಿಸುವ ಪರಮಾವಧಿ ತಲುಪಿದ್ದೀರಾದರೆ ಕಥೆ ಮುಗೀತು ಅಂತಾನೇ ಲೆಕ್ಕ.
ಅದೇನು ಯೋಚಿಸ್ತೀರಿ ಅಂತ ಕೇಳಿದ್ರೆ ವಿವರಿಸೋದು ಸ್ವಲ್ಪ ಕಷ್ಟ ಆಗಬಹುದು. ಯೋಚನೆ ಶೂನ್ಯವೂ ಹೌದು, ಅನಂತವೂ ಹೌದು. ಇದರಿಂದ ಸಮಸ್ಯೆ ಪರಿಹಾರ ಸಿಗೋ ಸಂಭವನೀಯತೆಯನ್ನು ಲೆಕ್ಕ ಹಾಕಲಾರೆ. ಆದರೆ, ಸಮಸ್ಯೆಗಳು ಹೆಚ್ಚೆಂದರೆ ಎಲ್ಲಿಯ ತನಕ ಹೋಗಿ ತಲುಪಬಹುದು ಎಂಬುದರ ಲೆಕ್ಕಾಚಾರವನ್ನಂತೂ ಹಾಕಿ, ಮಾನಸಿಕವಾಗಿ ತಯಾರಾಗಬಹುದು ಎಂದು ಮಾತ್ರ ಹೇಳಬಲ್ಲೆ.
ಚಿಕ್ಕವರಿದ್ದಾಗ "ಯೋಚನೆ ಮಾಡಿ ಮುಂದುವರಿ" ಎಂಬುದನ್ನೇ ಅಗತ್ಯಕ್ಕಿಂತ ಹೆಚ್ಚು ಗಂಭಿರವಾಗಿ ತೆಗೆದುಕೊಂಡಿದ್ದೇವೆ ಎಂದೆನಿಸತ್ತದೆ. ಪ್ರತಿ ಚಿಕ್ಕ ವಿಷಯಗಳ ಜಾಡು ಹಿಡಿದು, ಶೆರ್ಲಾಕ್ ಹೋಮ್ಸ್ ರೀತಿ ಮನಸ್ಸಿನಲ್ಲೆ ಮಂಥನ ನಡೆಸಿ, ಯೋಚನೆಗಳ ಏಜೆಂಟ್‌ಗಳನ್ನು ಬಿಟ್ಟು, ಏನೇನೋ ಭಾವಿಸಿ, ಕೊನೆಗೆ ಅದಿನ್ನೇನೋ ಆಗಿ... ಇನ್ನು ಯೋಜನೆ ಮಾಡಿದ್ರೆ ಗೊಬ್ಬರ ಆಗತ್ತೆ, ಇಲ್ಲಿಗೇ ನಿಲ್ಲಿಸಿ ಅಂದರೂ ನಿಲ್ಲಿಸೋದಕ್ಕಂತೂ ಆಗೋದೇ ಇಲ್ಲ ಅಲ್ವಾ?
ಯೋಚನೆಗಳ ಸುಳಿಯಲ್ಲಿ ಸಿಲುಕಿ ಬವಣೆಯಲ್ಲಿ ಬೇಯದಿರು ಅನ್ನೋ ದೊಡ್ಡ ಮಾತುಗಳನ್ನೆಲ್ಲ ಯಾವತ್ತಾದರೂ ಕೇಳಿದ್ದೀವಾ? ಬದಲಾಗಿ ಹಾಗೆ ಹೇಳಿದವರ ಬಗ್ಗೆಯೇ ಯೋಚಿಸಿದ್ದೇವೆ! ಖಾಲಿ ಗೋಡೆಯನ್ನು ನೋಡುತ್ತಾ ಯೋಚಿಸುವುದರಲ್ಲಿ ಮಜಾ ಅನಿಸುತ್ತೆ. ದೊಡ್ಡ ಸ್ನೇಹಿತರ ಗುಂಪಲ್ಲಿ ಒಬ್ಬರಿಗೊಬ್ಬರು ಮಾತಾಡುವಾಗಲೂ ಆಗಾಗ zone out ಆಗೋದ್ರಲ್ಲೂ ಒಂದು ರೀತಿಯ ಖುಷಿ. ಯೋಚಿಸುತ್ತಾ ನಡೆದು ನಡೆದು ದಾರಿ ತಪ್ಪಿದಾಗ, ಎಚ್ಚೆತ್ತು ಮತ್ತೆ ಸರಿಯಾದ ಹಾದಿಯನ್ನ ಆಗಾಗ ಹಿಡಿಯುತ್ತಿರಬೇಕು. ಇದನ್ನೆಲ್ಲ ಯಾಕೆ ಬರೆದೆ ಅಂತಾನೂ ಯೋಚನೆ ಮಾಡ್ತೀನಿ, ನೀವು ಓದಿ ಏನಾದ್ರೂ ಹೇಳಿದರೂ ಅದರ ಬಗ್ಗೆ ಯೋಚಿಸ್ತೀನಿ. ಯಾರೂ ಓದಿಲ್ಲವೆಂದರೂ ಯೋಚನೆ ಮಾಡೇ ಮಾಡ್ತೀನಿ!

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ