ಆಂಟಿನೇ ದೇವರು!
" ಹಾ ಗಾದ್ರೆ ನೀವ್ಯಾಕೆ ಶ್ರೀಮಂತೆ ಆಗ್ದೇ 60 ವರ್ಷ ಆದ್ರೂ ಕಸ ಗುಡಿಸ್ತಾ ಇದ್ದೀರಿ? ನೀವೇ ದೇವ್ರಾಗ್ಬೋದಿತ್ತಲಾ?" ನಾನ್ ಕೇಳಿದ್ ಪ್ರಶ್ನೆಗೆ ಆಂಟಿ ಸ್ವಲ್ಪನೂ ಬೇಸರ ಮಾಡಿಕೊಳ್ಳಲೇ ಇಲ್ಲ. ಅದರ ಬದಲಾಗಿ "ನಾನೇನಾದ್ರು ಶ್ರೀಮಂತೆ ಆಗಿದ್ದಿದ್ರೆ ಆಫೀಸ್ ಕಸ ಹೊಡಿಯಕೆ ಯಾರ್ ಸಿಕ್ತಿದ್ರು? ಈ ಆಪೀಸ್ ಓನರ್ಗೆ ನಂಗಿತ ಕಷ್ಟ ಐತೆ ತಕ. ನಂಗ್ ಸಿರಿತನ ಬ್ಯಾಡಾಕೂ ಬ್ಯಾಡ" ಅಂತ ನಕ್ರು. ನಮ್ಮಾಫಿಸಿನ ಆಂಟಿ ಅಂದ್ರೆ ನನಗಿಷ್ಟ. ಯಾಕಂದ್ರೆ ಅವರೊಬ್ಬರ ಹತ್ತಿರ ಮಾತ್ರ ಕನ್ನಡ ಅಂತ ಮಾತಾಡೋದು. ಎಲ್ಲರಿಗಿಂತ ಮುಂಚೆ ಬಂದು ಮಾನಿಟರ್ ಒಳಗೆ ಹೊಕ್ಕಿ ತಲ್ಲೀನಳಾಗೋ ನನಗೆ "ಗುಡ್ ಮಾರ್ನಿಂಗ್ ಕಣ, ನಿದ್ದೆ ಮಾಡು ಚನಾಗಿ ಇವತ್ತಾದ್ರು" ಅಂತ ಹೇಳೋರು ಅವರೊಬ್ಬರೇ. ಬೇಡವಾದ್ರೂ ಎಲ್ಲ ಸುದ್ದಿಗಳನ್ನ ಕಿವಿಗೆ ಮುಟ್ಟಿಸಿ, ಹಬ್ಬದ ತಿಂಡಿಯನ್ನ ಕೈಗೆ ಒಪ್ಪಿಸಿ, ವಾರಾಂತ್ಯದಲ್ಲಿ ಸಾಕು ಪಿಜಿಗೆ ನಡಿ ಎಂದು ಎಬ್ಬಿಸುವವವರು ಅವರೇ. ನನ್ನ ಹೆಸರು ಅವರಿಗೆ ಗೊತ್ತಿಲ್ಲ. ಆದರೂ ಮಾತನಾಡುತ್ತೇವೆ ಮತ್ತು ಕಷ್ಟ-ಸುಖ ಹಂಚಿಕೊಳ್ಳುತ್ತೇವೆ. 2 ತಿಂಗಳಿಂದ ಗ್ಯಾಸ್ ಬುಕ್ಕಾಗಿಲ್ಲ, ಗಂಡನಿಗೆ ಹುಷಾರಿಲ್ಲ, ಮೂವರು ಹೆಣ್ಣುಮಕ್ಕಳಿಗೆ ಮದುವೆಯಾಗಿದೆ, ಒಬ್ಬಳ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ದಾರಿಯಲ್ಲಿ ಹೊಸ ಯಾರೋ ತಮಿಳರು ಅಂಗಡಿ ತೆರೆದಿದ್ದಾರೆ, ಇವತ್ತು ಎಳನೀರನ್ನು 20 ರೂಪಾಯಿಗೆ ಮಾರುತ್ತಿದ್ದರು, ರೇಷನ್ ಕ್ಯೂ ಗೆ ಬೆಳಗ...