ಆಂಟಿನೇ ದೇವರು!


"ಹಾಗಾದ್ರೆ ನೀವ್ಯಾಕೆ ಶ್ರೀಮಂತೆ ಆಗ್ದೇ 60 ವರ್ಷ ಆದ್ರೂ ಕಸ ಗುಡಿಸ್ತಾ ಇದ್ದೀರಿ? ನೀವೇ ದೇವ್ರಾಗ್ಬೋದಿತ್ತಲಾ?" ನಾನ್ ಕೇಳಿದ್ ಪ್ರಶ್ನೆಗೆ ಆಂಟಿ ಸ್ವಲ್ಪನೂ ಬೇಸರ ಮಾಡಿಕೊಳ್ಳಲೇ ಇಲ್ಲ. ಅದರ ಬದಲಾಗಿ "ನಾನೇನಾದ್ರು ಶ್ರೀಮಂತೆ ಆಗಿದ್ದಿದ್ರೆ ಆಫೀಸ್ ಕಸ ಹೊಡಿಯಕೆ ಯಾರ್ ಸಿಕ್ತಿದ್ರು? ಈ ಆಪೀಸ್ ಓನರ್ಗೆ ನಂಗಿತ ಕಷ್ಟ ಐತೆ ತಕ. ನಂಗ್ ಸಿರಿತನ ಬ್ಯಾಡಾಕೂ ಬ್ಯಾಡ" ಅಂತ ನಕ್ರು. ನಮ್ಮಾಫಿಸಿನ ಆಂಟಿ ಅಂದ್ರೆ ನನಗಿಷ್ಟ. ಯಾಕಂದ್ರೆ ಅವರೊಬ್ಬರ ಹತ್ತಿರ ಮಾತ್ರ ಕನ್ನಡ ಅಂತ ಮಾತಾಡೋದು. ಎಲ್ಲರಿಗಿಂತ ಮುಂಚೆ ಬಂದು ಮಾನಿಟರ್ ಒಳಗೆ ಹೊಕ್ಕಿ ತಲ್ಲೀನಳಾಗೋ ನನಗೆ "ಗುಡ್ ಮಾರ್ನಿಂಗ್ ಕಣ, ನಿದ್ದೆ ಮಾಡು ಚನಾಗಿ ಇವತ್ತಾದ್ರು" ಅಂತ  ಹೇಳೋರು ಅವರೊಬ್ಬರೇ. ಬೇಡವಾದ್ರೂ ಎಲ್ಲ ಸುದ್ದಿಗಳನ್ನ ಕಿವಿಗೆ ಮುಟ್ಟಿಸಿ, ಹಬ್ಬದ ತಿಂಡಿಯನ್ನ ಕೈಗೆ ಒಪ್ಪಿಸಿ, ವಾರಾಂತ್ಯದಲ್ಲಿ ಸಾಕು ಪಿಜಿಗೆ ನಡಿ ಎಂದು ಎಬ್ಬಿಸುವವವರು ಅವರೇ.

ನನ್ನ ಹೆಸರು ಅವರಿಗೆ ಗೊತ್ತಿಲ್ಲ. ಆದರೂ ಮಾತನಾಡುತ್ತೇವೆ ಮತ್ತು ಕಷ್ಟ-ಸುಖ ಹಂಚಿಕೊಳ್ಳುತ್ತೇವೆ. 2 ತಿಂಗಳಿಂದ ಗ್ಯಾಸ್ ಬುಕ್ಕಾಗಿಲ್ಲ, ಗಂಡನಿಗೆ ಹುಷಾರಿಲ್ಲ, ಮೂವರು ಹೆಣ್ಣುಮಕ್ಕಳಿಗೆ ಮದುವೆಯಾಗಿದೆ, ಒಬ್ಬಳ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ದಾರಿಯಲ್ಲಿ ಹೊಸ ಯಾರೋ ತಮಿಳರು ಅಂಗಡಿ ತೆರೆದಿದ್ದಾರೆ, ಇವತ್ತು ಎಳನೀರನ್ನು 20 ರೂಪಾಯಿಗೆ ಮಾರುತ್ತಿದ್ದರು, ರೇಷನ್ ಕ್ಯೂ ಗೆ ಬೆಳಗಿನ ಜಾವ 3 ಗಂಟೆಗೆ ಹೋಗಿ ನಿಂತಿದ್ದರು.... ಹೀಗೆ ಅವರ ವಿವರ-ಪ್ರವರಗಳೂ ಸೇರಿದಂತೆ ಅವರೂರಿನ ಸಾಕಷ್ಟು ವಿಚಾರಗಳು ಗೊತ್ತು ನನಗೆ. ಎಲ್ಲದಕ್ಕೂ 'ಹ್ಞೂ'ಗುಡುತ್ತೇನೆ ಎಂಬ ಕಾರಣಕ್ಕೆ ಎಲ್ಲ ವರದಿಗಳನ್ನು ನನಗೆ ಒಪ್ಪಿಸುತ್ತಾರೆ. ಇಂತಿಪ್ಪ ಸಂದರ್ಭದಲ್ಲಿ ಇವತ್ತು ಟೇಬಲ್ ಕ್ಲೀನ್ ಮಾಡಲು ಹಸಿರು ಬಣ್ಣದ ಬಟ್ಟೆಗಳನ್ನು ಹಿಡಿದು ಆಂಟಿ ಬಂದರು. ವಾರಾಂತ್ಯವಾದ್ದರಿಂದ, ಯಾರೂ ಇಲ್ಲದ ಕಾರಣ ಮಾತನಾಡಲು ಆರಂಭಿಸಿದರು. 

ಪಕ್ಕದಲ್ಲಿ ಕುಳಿತಿದ್ದ ಕನ್ನಡ ಬರದ ಸಹೋದ್ಯೋಗಿಗೆ ಲ್ಯಾಪ್ಟಾಪ್ ಮಾನಿಟರ್ ಧೂಳಾಗಿದೆ, ಸ್ವಚ್ಚ ಮಾಡಲು ಹೇಳು, ಕೆಲಸ ದೇವರಲ್ವಾ ಎಂದು ಇಂಗ್ಲಿಷಿಗೆ ಭಾಷಾಂತರಿಸಿ ಹೇಳು ಎಂದು ನನ್ನಲ್ಲಿ ಹೇಳಿದಾಗ, ನಾನು ಈ ಬರಹದ ಮೊದಲು ಬರೆದ ಸಾಲುಗಳನ್ನು ಕೇಳಬೇಕಾಯ್ತು. "ನೀನಿಲ್ಲಿ ಇದ್ಯಾ ಅಂದ್ರೆ ಪರಮಾತ್ಮ ಇದ್ದಾನೆ ಅಂತ ಮಗಾ. ಹಂಗೆಲ್ಲ ಯಾರಾದ್ರೂ ಹೇಳ್ತಾರಾ? ಕಷ್ಟ ಬಂದ್ರೆ ದೇವರಿದ್ದಾನೆ ಅಂತ ಗೊತ್ತಾಗತ್ತೆ, ಯಾಕಂದ್ರೆ ಕಾಪಾಡಕ್ ಬರ್ತಾನಲ್ಲ!" ಎನ್ನುವಲ್ಲಿಗೆ ನಮ್ಮ ಅರ್ಧ ಗಂಟೆ ವಾಗ್ವಾದ ಮುಗಿಯಿತು. ಹೋಗುವಾಗ ನಾನಂದೆ "ಹಾಗಾದ್ರೆ ನೀವ್ ನಂಗೆ ಒಬ್ಬಟ್ಟು ಕೊಟ್ಟಿದ್ದೀರಿ, ಸಮಾಧಾನ ಹೇಳಿದ್ದಿರಿ, ನನ್ ಸುತ್ತ ಇರೋ ಕಲ್ಮಶನೆಲ್ಲ ದಿನಾ ಕ್ಲೀನ್ ಮಾಡ್ತೀರಿ, ಕಷ್ಟ-ಸುಖ ಕೇಳ್ತೀರಿ... ಹಾಗಾದ್ರೆ ನಂಗ್ ನೀವೇ ದೇವ್ರು ಆಂಟಿ" ಎಂದು ನಗುತ್ತಾ ಹೇಳಿದೆ. "ಹೋಗತ್ತಾಗೆ, ಏನೇನೋ ಹೇಳ್ತ್ಯಲ" ಅಂತಾ ಓಡಿಯೇ ಹೋದರು.

ದೇವರಿಗೆ ಮನಃಪೂರ್ವಕವಾಗಿ ಕೈ ಮುಗೀತಿಯಾ ಅಂತ ಯಾರಾದ್ರೂ ಕೇಳಿದ್ರೆ ಹೇಳೋಕೆ ಹಿಂದೆಮುಂದೆ ನೋಡೋಹಾಗೆ ಆಗುತ್ತೆ. ಆದರೆ ದೇವರು ಮಾತ್ರ ಪದೇಪದೇ ನಾನಿದ್ದೇನೆ ಅಂತಾ ಯಾರದ್ದಾದರೂ ರೂಪದಲ್ಲಿ ಬಂದು ನೆನಪು ಮಾಡುತ್ತಿರತ್ತಾನೆ. ಗೊತ್ತಿಲ್ಲ, ತುಂಬಾ ದಿನಗಳ ನಂತರ ಬರೆಯೋ ಹಾಗೆ ಮಾಡಿರೋ ಆಂಟಿ ದೇವಗಿರ್ಬೋದು, ಅಥವಾ ಅವರ ನಿಷ್ಕಲ್ಮಶ ಪ್ರೀತಿ ದೇವರಾಗಿರ್ಬೋದು. ನಾವು ಜೀವನದಲ್ಲಿ ತುಂಬಾ ದೇವರುಗಳನ್ನು ಭೇಟಿ ಮಾಡಿರ್ತೀವಿ, ಆದರೆ ಹಲವು ಬಾರಿ ತಿಳಿಯೋದೇ ಇಲ್ಲ. ಇಂದು ನಾನು, ಮುಂದೆ ನೀವು, ಯಾವತ್ತಾದರೂ ಪರಮಾತ್ಮನನ್ನ ಕಾಣ್ತೀವಿ. ಅಥವಾ ನಾವೇ ಬೆರೆಯವರ ಪಾಲಿಗೆ ಪರಮಾತ್ಮ ಆಗಿರ್ತೀವಿ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಯ್ಯಾ ಮಹಿಷಾ!

ಯೋಚನೆ ಮಾಡ್ಬೇಕು ಸ್ವಾಮಿ

ತಪ್ಪೋ ತಪ್ಪು