ಜಿಗಣೆ ಪ್ರಕರಣ

ಒಂದು unsolved ಕ್ರೈಂ ಇದೆ. ಮೊನ್ನೆ ಮನೆಯೆಲ್ಲ ರಕ್ತವಾಗಿತ್ತು. ಯಾರಿಗೆ ಗಾಯವಾಗಿದೆ ಎಂದು ತಿಳಿಯಲೇ ಎರಡು ಗಂಟೆ ಬೇಕಾಯಿತು. ಸಂತ್ರಸ್ತರನ್ನು ಪತ್ತೆ ಹಚ್ಚಿದರೂ, ಅಪರಾಧಿ ಯಾರೆಂದು ತಿಳಿಯಲಿಲ್ಲ. ಪತ್ತೇದಾರಿಗಳಂತೆ ಜಾಡು ಹಿಡಿದು ಹೊರಟರೂ ಎಲ್ಲಿ ತಲೆಮರೆಸಿಕೊಂಡಿದ್ದಾರೆಂದು ಗೊತ್ತಾಗಲಿಲ್ಲ. ಕಂಪ್ಲೇಟ್‌ ಕೊಟ್ಟು ಪ್ರಯೋಜನವಿಲ್ಲವೆಂದು ಸುಮ್ಮನಾದೆವು. ಏಕೆಂದರೆ ಅವರೆಲ್ಲ ರಕ್ತ ಬೀಜಾಸುರನ ಕಡೆಯವರಂತೆ!‌ 

ಅವರೇನಾದರೂ ಸೈನ್ಯ ಕಟ್ಟಿಕೊಂಡು ಬಂದರೆ ಡೆಟಾಲ್‌, ಅಂಟ್ವಾಳ ಕಾಯಿಯ ಕೋಟೆಯನ್ನೂ ಮುರಿದು ನಾವು ಹುಲು ಮಾನವರು ಸೋಲಬೇಕಾಗುತ್ತದೆ. ಮಳೆಗಾಲದಲ್ಲಿ ವಿಶೇಷ ಶಕ್ತಿ ಪಡೆದು ದಾಂಗುಡಿಯಿಟ್ಟು, ಹೆಂಗಸರ ಕೈಲಿ ಗಂಡಸರು ಬೈಗುಳ ತಿನ್ನುವಂತೆ ಮಾಡುತ್ತಾರೆ. ಹಾ ಹಾ! ಅವರೆ ಜಿಗಣಾಸುರರು. ಇಂಬಳ ಅಥವಾ ಜಿಗಣೆಗಳಷ್ಟು ತಣ್ಣಗಿನ ಕ್ರೂರಿಗಳು ಬಹುಶಃ ಮತ್ಯಾರಿಲ್ಲ. ಸದ್ದಿಲ್ಲದೇ ರಕ್ತ ಕುಡಿದು, ಕಾಲಿನಿಂದ ಇಳಿದು ಹೋಗಿ, ಯಾವುದೇ ಸಾಕ್ಷಿ ಉಳಿಸದ ಈ ಕ್ರಿಮಿನಿಲ್‌ಗಳಿಂದ ಆಗುವ ತೊಂದರೆ ಮಾತ್ರ ವಿವರಿಸಲಸದಳ.

ಇಂಗ್ಲಿಷ್‌ ಕವಿ ವರ್ಡ್ಸ್‌ವರ್ಥ್‌ ಗೊತ್ತಿರಬೇಕಲ್ಲ? ಅವರ "ಲೀಚ್‌ ಗ್ಯಾದರರ್‌" ಪದ್ಯ ಓದುವಾಗಲೆಲ್ಲ ಆ ವೃದ್ಧ ಜೀವಿ ಅಲ್ಲೆಲ್ಲೋ ಜಿಗಣೆಗಳನ್ನು ಕಷ್ಟಪಟ್ಟು ಹೆಕ್ಕುವ ಬದಲು, ಇಲ್ಲೇ ಬರಬಹುದಿತ್ತಲ್ಲ ಎನ್ನಿಸಿದ್ದುಂಟು. ಆದರೆ ಇಲ್ಲಿ ಮಾತ್ರ ಜಿಗಣೆಗಳಿಗೆ ಡೋಂಟ್‌ ಕೇರ್‌ ಅನ್ನೋದು ಕೂಡ ತಕ್ಷಣ ನೆನಪಾಗಿದ್ದುಂಟು. ಇಲ್ಲಿನ ಜನ ಲೀಚ್‌ ಥೆರಪಿಗೆ ಯಾವುದೋ ಆಸ್ಪತ್ರೆಗೆ ಹೋಗಬೇಕೆಂದಿಲ್ಲ. ಸರ್ಕಾರಿ ವೈದ್ಯರಂತೆ ಸ್ವಯಂಸೇವಕರಾಗಿ ತಾವೇ ಬಂದು ಕಚ್ಚಿ ಹೋಗುತ್ತವೆ. ಇಷ್ಟಾದರೂ ಅವುಗಳು ಬಂದು ರಕ್ತ ಹೀರದಂತೆ ಮಾಡಲೂ ನಾನಾ ಫಾರ್ಮುಲಗಳನ್ನು ಕಂಡುಹಿಡಿದು, ಹೊರಗೆ ಹೋಗುವ ಮುನ್ನ ಹಚ್ಚಿಕೊಂಡು ಹೋಗುತ್ತಾರೆ.

ಮಳೆಗಾಲದಲ್ಲಿ ಯಾರಾದರೂ ಮನೆಗೆ ಬಂದರೆ, ಮೊದಲು ಒಳಗೆ ಬರದೇ ಚಿಕ್ಕ ಪೇಪರಿನ ತುಂಡು ಕೇಳಿ, ಜಿಗಣೆ ಕಚ್ಚಿದ ಗಾಯಗಳನ್ನು ಪತ್ತೆ ಹಚ್ಚಿ ಅದಕ್ಕೆ ಅಂಟಿಸಿಕೊಳ್ಳುವುದು ಸಂಪ್ರದಾಯ. ಇನ್ನು ಮೆಟ್ಟಿಲು ಹತ್ತುವ ಮುನ್ನ, ಎಲ್ಲಾದರೂ ಕಾಲ ಬೆರಳ ಸಂದಿ ಜಿಗಣೆ ಕಚ್ಚಿ ಅವರ ಮನೆಯೆಲ್ಲ ರಕ್ತದ ಹೆಜ್ಜೆಯಾದರೆ ಎಂದು ಪರಿಶೀಲಿಸಿಕೊಳ್ಳುವುದು ಶಿಷ್ಟಾಚಾರ. "ಭಾರಿ ಜಿಗ್ಳೆ ಮಾರ್ರಾ, ಬಿಟ್ರೆ ತಲೆ ತಂಕ ಬರೂಕ್‌ ಸಾಕು" ಅನ್ನೋದರಿಂದಲೇ ಮಾತುಕತೆ ಶುರುವಾಗುತ್ತದೆ. ಜಿಗಣೆ ಕಚ್ಚಿದ್ದು ಮನೆಯೊಳಗೆ ಬಂದಮೇಲೆ ತಿಳಿದು, ಅಕಸ್ಮಾತ್‌ ಅದು ಕಾಲಿನಲ್ಲಿಲ್ಲದಿದ್ದರೆ ಕತೆ ಮುಗಿಯಿತು. ಜಿಗಣೆ ಎಲ್ಲಿ ಬಿದ್ದಿರಬಹುದು ಎಂದು ಒಳಗೆ ಓಡಾಡಿದ ಜಾಗವನ್ನೆಲ್ಲ ಹುಡುಕುವಷ್ಟರಲ್ಲಿ ಸಾಕಾಗಿ ಹೋಗುತ್ತದೆ.

ಶಾಲೆಗೆ ಹೋಗುವಾಗ ಜಿಗಣೆ ಹತ್ತಿದರೆ ಕಿರುಚಿ ಅತ್ತುಬಿಡುತ್ತಿದ್ದೆ. ಈಗ ಅಕಾಸ್ಮಾತ್‌ ಹತ್ತಿರದಲ್ಲಿ ಯಾರೂ ಇಲ್ಲದಿದ್ದರೆ, ಎಲೆ ಅಥವಾ ಪೇಪರಿನ ಸಹಾಯದಲ್ಲಿ ತೆಗೆದು ಹಾಕುಷ್ಟು ಧೈರ್ಯ ತಂದುಕೊಂಡಿದ್ದೇನೆ. ಆದರೂ ಇಂಬಳಗಳನ್ನು ನೋಡಿದರೆ ಕೆಲವೊಮ್ಮೆ ಸಿಟ್ಟು ಬರುತ್ತದೆ. ಕಷ್ಟಪಟ್ಟು ಮನೆಯೆಲ್ಲ ಫಳಫಳ ಹೊಳೆಯುವಂತೆ ಒರೆಸಿ, ಕಣ್ತುಂಬಿಕೊಳ್ಳುವಷ್ಟರಲ್ಲೇ ಬಿಳಿ ಟೈಲ್ಸ್‌ನ ನೆಲದಲ್ಲಿ ಕೆಂಪು ಹೆಜ್ಜೆಗಳು ಮೂಡಿಬಿಟ್ಟಿರುತ್ತವೆ. ಹೆಜ್ಜೆ ಇಟ್ಟವರಿಗೆ, ಕಚ್ಚಿದವರಿಗೆ ಬೈದರೂ, ಇಬ್ಬರೂ ಒರೆಸುವುದಿಲ್ಲವಲ್ಲ...

ಜಿಗಣೆ ಕಚ್ಚಿ, ನಂಜಿಗೆ ಪರ ಪರ ಕೆರೆದು ಕೆರೆದು, ಕೆರೆದಾಗಲೆಲ್ಲ ಎಂದೋ ಕಚ್ಚಿಹೋದ, ಮುಂದೆ ಕಾಣಲೂ ಸಿಗದ ಆ ಅಪರಿಚಿತನನ್ನು ನೆನಪು ಮಾಡಿಕೊಂಡು, ಕೆಲಸ ಹೆಚ್ಚು ಮಾಡುವ ಮತ್ತೆ ಅಂಗಳಕ್ಕೆ ಕಾಲಿಡದಂತೆ ಬೆದರಿಸುವ ಶತ್ರುವನ್ನು ಶಪಿಸುತ್ತಾ ಯಾವಾಗಲಾದರೂ ಕಾಲ ಕಳೆದಿದ್ದೇವೆಂದರೆ ನಾವು ಒಂಥರಾ ಅದೃಷ್ಟವಂತರು. ಕರೆಯದೇ ಬಂದು ಭೂಗತವಾಗುವ ಈ ಅತಿಥಿ ಬಯಸುವುದು ನಮ್ಮ ದೇಹದ ತುಸು ಕೆಟ್ಟ ರಕ್ತವನ್ನ. ನೋಯಿಸದಿದ್ದರೂ ನಾವೆಷ್ಟು ಶಪಿಸುತ್ತೇವೆ, ಕೋಪಿಸಿಕೊಳ್ಳುತ್ತೇವೆ! ಹಾಗೆಂದು "ನೀನು ತೋಟದ ತುಂಬ ತಿರುಗಿ ಹತ್ತಾರು ಜಿಗಣೆಗಳಿಗೆ ರಕ್ತದಾನ ಮಾಡಿ ದೇವರಾಗು" ಎನ್ನಬೇಡಿ, ನನಗೂ ಸ್ವಲ್ಪ ಭಯ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಯ್ಯಾ ಮಹಿಷಾ!

ಯೋಚನೆ ಮಾಡ್ಬೇಕು ಸ್ವಾಮಿ

ತಪ್ಪೋ ತಪ್ಪು