ಅಯ್ಯಾ ಮಹಿಷಾ!


ದೂ
ರದೂರಿನಲ್ಲಿ ಉದ್ಯೋಗದಲ್ಲಿರೋ ಬೆಳೆದ ಮಕ್ಕಳೆಲ್ಲ ಪೋಷಕರಿಗೆ ತಿಳಿಯದಂತೆ ಸರ್‌ಪ್ರೈಸ್‌ ಕೊಡೋ ಸಲುವಾಗಿ ಇದ್ದಕ್ಕಿಂದಂತೆ ಮನೆಗೆ ಹೋಗಿ, ಅದನ್ನು ವಿಡಿಯೋ ಕೂಡ ಮಾಡಿ ಪೋಸ್ಟ್‌ ಮಾಡಿದ್ದನ್ನು ನೋಡ್ತಾ ನಾನೂ ಒಂದು ಯೋಜನೆ ಹಾಕಿದ್ದೆ. ಯೋಚನೆಯ ಹಿಂದೆಯೇ ಭಯವೂ ಒತ್ತರಿಸಿಕೊಂಡು ಬಂದಿತ್ತು. ಬೆಂಗಳೂರಿನಿಂದ ರಾತ್ರಿ ಬಸ್‌ ಹತ್ತಿದರೆ, ಕಳಸದಲ್ಲಿ ಇಳಿದು, ಅಲ್ಲಿಂದ ಮುನ್ನೂರ್‌ಪಾಲಿನಲ್ಲಿರುವ ನಮ್ಮ ಮೆನೆಗೆ ಹೋಗಬೇಕೆಂದರೆ, ಸಂಪಿಗೆಕಟ್ಟೆ ಬಸ್‌ ಸ್ಟಾಪಿಗೆ ಹೇಗಾದರೂ ಕಷ್ಟ ಪಟ್ಟು ಎಂಟು ಕಿ.ಮೀ ಪ್ರಾಯಣಿಸಬಹುದು. ಸ್ವಂತ ವಾಹನವಿಲ್ಲದಿದ್ದರೆ, ಮತ್ತೆ ನಮ್ಮ ಮನೆಗೆ ಎರಡು ಮೈಲಿ ನಡೆಯಬೇಕಾಗುತ್ತದೆ. ಅಕಸ್ಮಾತ್‌ ದುಸ್ಸಾಹಸ ಮಾಡಿ ಒಬ್ಬಳೇ ನಡೆದು, ಅರ್ಧ ದಾರಿಯಲ್ಲಿ ಕಾಟಿಯ ಹಿಂಡು ಪೂರ್ಣಕುಂಭ ಸ್ವಾಗತ ಮಾಡಿದರೆ!? ಈ ಎಲ್ಲ ಯೋಚನೆಗಳಿಂದ ನಾನು ಅಪೂರ್ವಕ್ಕಾದರೂ ಮನೆಗೆ ಹೋಗಬೇಕು ಎಂದೆನಿಸಿದರೆ ಮೊದಲೇ ತಿಳಿಸಿಯೇ ತೆರಳೋದು.

ಯಕ್ಷಗಾನದ ಶ್ರೀ ದೇವಿ ಮಹಾತ್ಮೆ ಪ್ರಸಂಗದಲ್ಲಿ ಬರುವ ಮಹಿಷಾಸುರನನ್ನು ಕಂಡು ರೋಮಾಂಚಿತರಾಗಿ, ಪ್ರಸಂಗ ಮುಗಿಸಿ ಅದೇ ರಾತ್ರಿ ನಮ್ಮೂರ ದಾರಿ ಹಿಡಿದರೆ ಇನ್ನೊಂದು ಮಹಿಷನ ದರ್ಶನವಾಗಿ ಹೊಸ ಪ್ರಸಂಗ ಸೃಷ್ಟಿಯಾಗುತ್ತದೆ. ಕಾಟಿ ಅಂದರೆ ಸಾಕು ನಮ್ಮ ಕಡೆ ವಿಧ ವಿಧ ಕಥೆಗಳು ಹುಟ್ಟಿಕೊಳ್ಳುತ್ತೆ. ಈ ಕಾಡುಕೋಣಗಳಂತೂ ವಿಲನ್‌ ಪಟ್ಟ ಹೊತ್ತ ಸೂಪರ್‌ ಹೀರೋಗಳಾಗಿವೆ.

ಕಾಟಿ ನಿನಗ್ಯಾರು ಸಾಟಿ ಅನ್ನೋ ರೀತಿ, ಅವುಗಳ ರಾಜ್ಯಭಾರವನ್ನ ಕೇಳೋದೇ ಬೇಡ. ನಮ್ಮ ಕಪ್ಪು ಬಣ್ಣದ ಆಲ್ಟೋ 800 ಕಾರಿಗೂ, ದಾರಿಯ ಮಧ್ಯೆ ಧಕ್ಕನೆ ಪ್ರತ್ಯಕ್ಷವಾಗುವ ಕಾಟಿಗಳಿಗೂ ಒಮ್ಮೊಮ್ಮೆ ವ್ಯತ್ಯಾಸವೇ ಇಲ್ಲ ಎಂದೆನಿಸುತ್ತದೆ. ಎದುರುಬದುರಾದಾಗ ಕಾರು ಮತ್ತು ಕಾಟಿಯ ಕಾಲುಗಳು ಬ್ರೇಕ್‌ ಹಾಕುತ್ತವೆ. ಯಾರು ಮೊದಲು ಹೆಜ್ಜೆ ಇಡಬೇಕೆಂಬುದೇ ಗೊಂದಲ, ಎರಡು ಪಕ್ಷದವರಿಗೂ ಭಯವೋ ಭಯ. ಅದೇನೋ ವರ್ಷಕ್ಕೊಮ್ಮೆ ಬರುವ ಅತಿಥಿಯ ಹಾಗೆ ಬಂದು ತೋಟದಲ್ಲಿ ಸ್ವಲ್ಪಕಾಲ ತಿಂದುಂಡು ಹೋಗುವ ಈ ಕಾಟಿಗೂ ಸಕ್ಕತ್ತಾಗೆ ಹವಾ ಮೇಂಟೇನ್‌ ಮಾಡುತ್ತವೆ. 

ಕಾಡುಕೋಣಗಳ ಹಾವಳಿ ನಮ್ಮ ಭಾಗದಲ್ಲಿ ಗಂಭೀರ ಸಮಸ್ಯೆಯಾಗುದ್ದರೂ ಅದರ ಸುತ್ತ ಹೆಣೆದುಕೊಂಡಿರುವ ಕತೆಗಳಂತೂ ಆಸಕ್ತಿದಾಯಕವಾಗಿವೆ. " ತ್ವಾಟ್‌ದಲ್ಲಿ ಕಾಟಿ ಹೆಜ್ಜೆ ಕಾಣ್ತಿದೆ ಕಂಡ್ರಾ" ಅಂತಾ ಕೆಲಸದಾಳು ಬಂದ ಕೂಡಲೇ ಕಾಫಿ ಕುಡಿಯುತ್ತಾ ಸುದ್ದಿ ಮುಟ್ಟಿಸುತ್ತಾರೆ. ಅಲ್ಲಿಂದ ಕಾಟಿಯ ದರ್ಬಾರ್‌ ಶುರುವಾಗುತ್ತೆ. ತೋಟಕ್ಕೆ ಯಾರದೋ ಮನೆಯ ದನ ನುಗ್ಗಿ, ಕಾಫಿ ಬಡ್ಡೆಗಳ ಸಂದಿಯಲ್ಲಿ ಬಂದರೂ ಕಾಟಿಯೇ ಬಂದಂತೆ ಅನಿಸುತ್ತೆ. ಸುಂದರವಾದ ನವಿಲುಗಳೂ ಕಾಡೆಮ್ಮೆಗಳ ರೂಪ ತಳೆದಂತೆ ಭಾಸವಾಗುತ್ತದೆ. ಈಗಂತೂ ದೀಪಾವಳಿ ಹಬ್ಬದ ಗೋಪೂಜೆ ವೇಳೆ "ಕಾಟಿಗೂ ಒಂದ್‌ ಮಾಲೆ ಕಟ್ಟಿಡುಕಾ" ಅಂತ ಕೇಳಿ ತಮಾಷೆ ಮಾಡುವಂತಾಗಿದೆ. ಎಲ್ಲ ಶತಪ್ರಯತ್ನಗಳ ನಡುವೆಯೂ ನಮ್ಮ ತೋಟದಲ್ಲೇ ಉಳಿಯವೇಕೆಂಬ ಹಟ ಅವಕ್ಕೆ. ಈಗಂತೂ ಮನೆಯ ಅಂಗಳಕ್ಕೇ ಬಂದು ಹೂ ಗಿಡಗಳಿಗೆ ಬಾಯಿ ಹಾಕುವ ಕಾಡುಕೋಣಗಳನ್ನು ನೋಡಿ ನೋಡಿ ಎಷ್ಟೋ ಜನಕ್ಕೆ ಅಭ್ಯಾವಾಗಿಬಿಟ್ಟಿದೆ. ಸ್ವಲ್ಪ ದಿನ ಬಿಟ್ಟರೆ ದನದ ಕೊಟ್ಟಿಗೆಯಲ್ಲೇ ವಾಸ್ತವ್ಯ ಹೂಡಿಬಿಡುತ್ತವೆಯೇನೋ ಎಂದೆನಿಸುತ್ತದೆ.

ಸುಮ್ಮನೆ ತಿರುಗಾಡುತ್ತಾ, ಎಷ್ಟೋ ಮಾಸಗಳ ಕಾಲ ಯಾರದೋ ತೋಟದಲ್ಲಿ ತಂಗುವ ಕಾಟಿಗಳು ಮಲೆನಾಡ ಮಧ್ಯೆ ಇರುವ ನಮ್ಮ ಕುಟುಂಬದಿಂದ, ಯಾವುದೋ ನಗರದಲ್ಲಿ ಏನೋ ಮಾಡುತ್ತಿರುವ ನನ್ನವರೆಗೂ ಎಷ್ಟು ಪರಿಣಾಮ ಬೀರಿದೆಯಲ್ಲಾ ಎಂದೆನಿಸುತ್ತದೆ. ಮಾತನಾಡಲು, ಕಥೆ ಹೇಳಲು ಇದೊಂದು ವಿಷಯ ಅಷ್ಟೆ. ತನ್ನ ಸುತ್ತ ಇಷ್ಟೆಲ್ಲ ರಸವತ್ತಾದ ಕಥೆಗಳು ಸೃಷ್ಟಿಯಾಗಿವೆ ಎಂದು ತಿಳಿದರೆ ಬಹುಶಃ ಕಾಟಿಗಳು ನಮ್ಮ ಕಡೆ ಬರೋದನ್ನೇ ನಿಲ್ಲಿಸಬಹುದು!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಯೋಚನೆ ಮಾಡ್ಬೇಕು ಸ್ವಾಮಿ

ತಪ್ಪೋ ತಪ್ಪು