ತಪ್ಪೋ ತಪ್ಪು
"ನಾನ್ ಹಾಗೆ ಹೇಳ್ತಿರೋದಲ್ಲ, ದಯವಿಟ್ಟು ಅಪಾರ್ಥ ಮಾಡ್ಕೋಬೇಡಿ ಪ್ಲೀಸ್" ಅಂದಾಗ ನಖಶಿಖಾಂತ ಉರಿದು ಹೋಗಿತ್ತು. "ಅಲ್ಲ, ನನ್ನ ಏನೆಂದುಕೊಂಡಿದ್ದೀರಾ?" ಎಂದು ಕೇಳಿದ ಕೂಡಲೇ ಒಂದೇ ಒಂದು ಮಾತು ಕೂಡ ನಾಲಗೆಯಲ್ಲಿ ಹೊರಳದೇ ಸುಮ್ಮನಾಗಿದ್ದೆ. ಅವರ ಮಾತಿನಲ್ಲೂ ನನಗೆ ʼದಯವಿಟ್ಟುʼ ಹಾಗೂ ʼಪ್ಲೀಸ್ʼ ಎರಡೂ ಪದಗಳನ್ನು ಒಟ್ಟಾಗಿ ಬಳಸಿದರೆ ತಪ್ಪಾಗುವುದಿಲ್ಲವೇ ಎಂದು ಅನಿಸಿದಕ್ಕೆ ನಂದೊಂದು ಹಾಳು ಬುದ್ಧಿ ಎಂದು ಸುಮ್ಮನಾಗಿದ್ದೆ. ಎಲ್ಲ ವಾಕ್ಯಗಳಲ್ಲೂ ತಪ್ಪುಗಳನ್ನು ಹುಡುಕುವುದು... ಅಲ್ಲಲ್ಲ ತಪ್ಪುಗಳು ಕಾಣುವುದು ಖಯಾಲಿಯೋ ಅಥವಾ ಖಾಯಿಲಿಯೋ ತಿಳಿಯದು. ಆದರೆ ಹೀಗೊಂದು ಅಭ್ಯಾಸ ಇರುವುದಂತೂ ಆಗಾಗ ಸಾಬೀತಾಗಿ ಹಲವರ ಕೆಂಗಣ್ಣಿಗೆ ಗುರಿಯಾಗುವುದುಂಟು. ತಪ್ಪನ್ನು ಕಂಡುಹಿಡಿದು ನನ್ನಲ್ಲೇ ಇಟ್ಟುಕೊಂಡರೆ ಅಥವಾ ನಾನೂ ಯಾವುದೇ ತಪ್ಪುಗಳನ್ನು ಮಾಡದಿದ್ದರೆ ಈ ರೀತಿಯ ಸಮಸ್ಯೆ ಆಗುತ್ತಿರಲಿಲ್ಲವೇನೋ.
ಬೆಂಗಳೂರಿನಿಂದ ಮನೆಗೆ ಬರುವಾಗ ಕತ್ತರಿಗುಪ್ಪೆಯಲ್ಲಿ ಬಸ್ ಹತ್ತಬೇಕಿತ್ತು. ಕಂಡಕ್ಟರ್‌ಗೆ ಕರೆ ಮಾಡಿ ಎಲ್ಲಿ ಹತ್ತಬೇಕೆಂದು ವಿಚಾರಿಸಿದೆ. ಅದರ ಹಿಂದಿನ ಕಥೆ ಇನ್ನೊಂದು ಬ್ಲಾಗ್‌ಗೆ ಆಗುವಷ್ಟು ದೊಡ್ಡದಿದೆ ಬಿಡಿ. ಒಟ್ಟಿನಲ್ಲಿ ಅವರು ಕತ್ತರಿಗುಪ್ಪೆ ಬಳಿ ಇರುವ "ಅಣ್ಣಿ ಕುಟೀರ"ದ ಬಳಿ ನಿಂತಿರಲು ಸೂಚಿಸಿದರು. ಎಲ್ಲಿ ಹುಡುಕಿದರೂ "ಅಣ್ಣಿ ಕುಟೀರ" ಇಲ್ಲ. ಕೊನೆಗೆ ಬಸ್ ಹತ್ತುವಾಗ "ಅಣ್ಣ, ಅದು ಅಣ್ಣಿ ಕುಟೀರ ಅಲ್ಲ, ಅನ್ನ ಕುಟೀರ" ಎಂದು ಬಸ್ ಡೋರ್‌ನಲ್ಲೇ ನಿಂತು ಪಾಠ ಮಾಡಿದ ಮರುಕ್ಷಣವೇ ಇದನ್ನು ಇಷ್ಟೊಂದು ಗಂಭೀರವಾಗಿ ಪರಿಗಣಿಸಬೇಕಾಗಿರಲಿಲ್ಲ ಎಂದು ನಾಚಿಕೆಯಾಯಿತು. ತಪ್ಪುಗಳು ಪಟ್ಟನೆ ಕಣ್ಣಿಗೆ ಬಿದ್ದು, ಕೈ ಬೀಸಿ ಕರೆಯುತ್ತವೆ. ಬಾಯಿ ಮುಚ್ಚಿಕೊಂಡಿರಬೇಕೆಂದು ಎಷ್ಟು ತಡೆದರೂ ಹೇಳಿಯೇ ಬಿಡುತ್ತೇನೆ.
ಧರ, ಲೆಕ್ಸೆರಿ, ಹಾಗು, ದೇವಸ್ತಾನ, ಸಿಬ್ಬಂದಿಗಳು, ನಾವುಗಳು, ಜನಗಳು... ಹೀಗೆ ಸಾವಿರಾರು ಬೋರ್ಡ್‌ಗಳನ್ನು ನೋಡಿ ತಲೆಕೆಡಿಸಿಕೊಳ್ಳುತ್ತೇನೆ. ಪುಸ್ತಕ ಓದುವಾಗ ಒಂದು ಅಕ್ಷರ ದೋಷ ಸಿಕ್ಕರೆ "ಅಲ್ಲ ಇಷ್ಟೊಂದು ದೊಡ್ಡ ಲೇಖಕರು ಹೀಗೆ ಮಾಡಬಹುದೇ?" ಎಂದು ಚಡಪಡಿಸಿದ್ದುಂಟು. ದಿನಪತ್ರಿಕೆಗಳಲ್ಲಂತೂ ಅಕ್ಷರ ದೋಷ ಸಿಕ್ಕರೆ ಸಹಿಸಲಸಾಧ್ಯ. ಹೀಗೆ ಅಕ್ಷರ ದೋಷಗಳ ಫೋಬಿಯಾ ಬಹುಶಃ ಮಾವ ಹೇಳುತ್ತಿದ್ದ ಈ ಕಥೆಯಿಂದ ಶುರುವಾಗಿದ್ದೇನೋ ಎಂಬ ಅನುಮಾನವಿದೆ. ವರದರಾಜ ಎಂಬ ಬಾಣಾವರದ ಒಬ್ಬ ಡಾಕ್ಟರ್ ಹೊಸತಾಗಿ ಕ್ಲಿನಿಕ್ ತೆರೆದರಂತೆ. ವಾರ ಪೂರ್ತಿ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ, ಭಾನುವಾರ ಮಾತ್ರ ಕ್ಲಿನಿಕ್‌ನಲ್ಲಿ ರೋಗಿಗಳನ್ನು ನೋಡುತ್ತಾರೆ. ಬಹಳ ಖ್ಯಾತ ಡಾಕ್ಟರ್ ಇವರು. ಕ್ಲಿನಿಕ್ ಮುಂದೆ ದೊಡ್ಡದಾಗಿ "ವರದರಾಜ ಬಾಣಾವರ" ಎಂದು ದೊಡ್ಡ ಬೋರ್ಡ್ ಬರೆಸಿ ಹಾಕುವಂತೆ ಗುಂಡನಿಗೆ ಕೆಲಸ ಕೊಟ್ಟರು. ಗುಂಡನಿಗೆ ಅಕ್ಷರ ದೋಷಗಳಿಲ್ಲದೆ ಬರೆಯಲು ಬರದು. ಬೋರ್ಡ್ ಹಾಕಿದಮೇಲೆ ಭಾನುವಾರ ಯಾವ ರೋಗಿಯೂ ಬರಲೊಲ್ಲರು. ಸಮಸ್ಯೆಯ ಜಾಡು ಹಿಡಿದು ಕ್ಲಿನಿಕ್ ಮುಂದೆ ಯೋಚಿಸುತ್ತಿದ್ದಾಗ ಬೋರ್ಡ್ ಕಂಡಿತು. ಅದರಲ್ಲಿ ಗುಂಡನ ಅಚಾತುರ್ಯದಿಂದ "ವರದರಾಜ ಬಾಣಾವರ" ಎನ್ನುವ ಬದಲು "ವಾರದ ರಜ ಭಾನುವಾರ" ಎಂದಾಗಿತ್ತು. ಈ ಕತೆ ಕೇಳಿದ ಮೇಲೆ ಅಕ್ಷರ ದೋಷಗಳ ಕಡೆಗೆ ಗಮನ ಹರಿಸದೆ ಹೇಗಿರಲಿ?
ಆದರೆ ಈ ತಪ್ಪು ಹುಡುಕುವ ಚಾಳಿಯಿಂದ ಎಷ್ಟೋ ಜನರ ಬಳಿ ನಿಷ್ಠುರ ಕಟ್ಟಿಕೊಂಡಿದ್ದೇನೆ. ಕೆಲವರು ಇದರಿಂದಲೇ ಸ್ನೇಹಿತರಾಗಿದ್ದಾರೆ. ಆದರೂ ಹೀಗೆ ಒಮೊಮ್ಮೆ ಯಾರಿಗೂ ಕಾಣದ ವಾಕ್ಯ ದೋಷಗಳನ್ನು ಕಂಡುಹಿಡಿದು ಮೆಚ್ಚುಗೆ ಗಳಿಸಿದಾಗ ಖುಷಿಯಾಗುವುದುಂಟು. ಅಷ್ಟಾಗಿಯೂ ನಾನು ನೂರು ತಪ್ಪುಗಳನ್ನು ಮಾಡಿರುತ್ತೇನೆ. ನನ್ನ ಬರಹದಲ್ಲಿ ತಪ್ಪುಗಳನ್ನು ಹುಡುಕಿದ್ದಳಲ್ಲ ಎಂಬ ಕಾರಣಕ್ಕೆ ಎಷ್ಟೋ ಜನ ನಾನು ಬರೆದಾಗ ತಪ್ಪುಗಳನ್ನು ತಿದ್ದಿದ್ದಾರೆ. ಇದೊಂತರಾ ಚೆನ್ನಾಗಿದೆ. ಈಗ ನಾನೆಷ್ಟು ಅಕ್ಷರ, ಪದ, ವಾಕ್ಯ, ವ್ಯಾಕರಣದೋಷಗಳನ್ನು ಇಲ್ಲಿ ಮಾಡಿದ್ದೇನೆ ಎಂದು ಹೇಳಿ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ